Sunday, 19 May 2019

ನಿಮ್ಮ ಸಂಸದರ ಜವಾಬ್ದಾರಿ ತಿಳಿಯಿರಿ.. ಪ್ರಶ್ನಿಸಿ..

ಸಂಸದರ ಹೊಣೆಗಾರಿಕೆ  ಮತ್ತು ಅಧಿಕಾರಗಳು......
   ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಂದ ಅಭ್ಯರ್ಥಿಯೊಬ್ಬರು ತಮ್ಮ ಪಟಾಲಮ್ಮಿನೊಂದಿಗೆ ಹಳ್ಳಿಯ ಬೀದಿಯಲ್ಲಿ ಕೈ ಮುಗಿದುಕೊಂಡು ಮತಯಾಚಿಸುತ್ತಿದ್ದರು. ವಯಸ್ಸಾದ ಮಹಿಳೆಯೋರ್ವಳು ಇವರನ್ನು ತಡೆದು ಭಾರವಾಗಿಯೇ ಪ್ರಶ್ನಿಸತೊಡಗಿದರು.  ' ನಮ್ಮ  ಬೀದಿದೀಪ   ಉರಿಯದೇ ತಿಂಗಳುಗಳೇ ಕಳೆದು ಹೋದವು.  ನಾವೆಷ್ಟು ಬಾರಿ ಹೇಳಿಕೊಂಡರೂ ಇನ್ನೂವರೆಗೆ  ಯಾರು ಅದನ್ನು ಸರಿಪಡಿಸಿಲ್ಲ. ನೀವು ಚುನಾವಣೆಯಲ್ಲಿ  ಗೆದ್ದು ಹೋದ ನಂತರ ನಮ್ಮ ಕಷ್ಟ , ಸುಖ ಕೇಳುವುದೆ ಇಲ್ಲ.  ನಾವ್ಯಾಕೆ  ಮತ ನೀಡಬೇಕು ಹೇಳಿ?
    ತಮ್ಮ ಜೊತೆಗೆ  ನಡೆಯುತ್ತಿದ್ದ ಆ ಭಾಗದ  ಪಂಚಾಯತ ಸದಸ್ಯರೋರ್ವರೊಂದಿಗೆ   ಮಾತನಾಡಿದ  ಅಭ್ಯರ್ಥಿ, ಬೀದಿದೀಪ ಸರಿಪಡಿಸಿಕೊಡುವ  ಭರವಸೆ ನೀಡಿ ಮುಂದೆ ಸಾಗಿದರು.  ಇಂತಹ ದೃಶ್ಯಗಳು   ಕೇವಲ  ಹಳ್ಳಿಗಳಿಗೆ  ಸೀಮಿತವಾಗಿಲ್ಲ.  ಪೇಟೆ ಪಟ್ಟಣಗಳ ಸುಶಿಕ್ಷಿತರೆನಿಸಿಕೊಂಡವರು ಇದಕ್ಕಿಂತ ಬಹಳ ಭಿನ್ನವಾಗೇನೂ ಇರುವುದಿಲ್ಲ.  ಅಷ್ಟೇಕೆ  ರಾಜ್ಯಶಾಸ್ತ್ರವನ್ನು  ಅಧ್ಯಯನ ಮಾಡಿ ಪದವಿ ಪಡೆದವರೂ ಕೂಡಾ ಶಾಸಕ  ಮತ್ತು ಸಂಸದರ ಹೊಣೆಗಾರಿಕೆ  ಮತ್ತು  ಕರ್ತವ್ಯದ ಕುರಿತು ಪರೀಕ್ಷೆಗಾಗಿ ಓದಿ, ಬರೆದು ಶೇಕಡಾ ತೊಂಬತ್ತರಷ್ಟು ಅಂಕ ಪಡೆದದ್ದನ್ನು  ಮರೆತಿರುತ್ತಾರೆ. ನಾವು ಆಯ್ಕೆ ಮಾಡುವ  ಪಂಚಾಯತ  ಸದಸ್ಯ, ಶಾಸಕ, ಸಂಸದರಿಂದ  ನಾವೇನು ನಿರೀಕ್ಷಿಸಬೇಕೆಂಬ ಪ್ರಾಥಮಿಕ ಜ್ಞಾನವೂ  ಹೆಚ್ಚಿನ ಮತದಾರರಿಗಿಲ್ಲದಿರುವುದು ಭಾರತದ ಪ್ರಜಾತಂತ್ರ ವ್ಯವಸ್ಥೆಯ ದುರಂತ.
     ಇದರಿಂದಾಗಿಯೇ ಅಭ್ಯರ್ಥಿಗಳು ಹಾಗೂ ಪಕ್ಷದವರು ಮಾಡುವ ಭಾವನಾತ್ಮಕ  ಭಾಷಣಗಳಿಗೆ, ನೀಡುವ  ಭರವಸೆಗಳಿಗೆ ಹಂಚುವ ಹಣಕ್ಕೆ ಮರುಳಾಗಿ ಮತ ನೀಡುತ್ತಾರೆ.
  ಒಬ್ಬ ಸಂಸದನ ಜವಾಬ್ದಾರಿ ರಿಬ್ಬನ್  ಕತ್ತರಿಸುವುದಲ್ಲ ಎಂಬುದು ಸರಿ. ಆದರೆ  ತನ್ನ ಕ್ಷೇತ್ರದ  ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಮಟ್ಟದಲ್ಲಿ  ಚರ್ಚಿಸಿ, ಅವುಗಳಿಗೆ  ಪರಿಹಾರ ಕಂಡು ಹಿಡಿಯಲು  ಪ್ರಶ್ನಿಸುವುದು ಸಂಸದರ  ಪ್ರಥಮ ಕರ್ತವ್ಯ.  ಸಂಸದರೆಂದರೆ  ಒಂದು ಲೋಕಸಭಾ ಕ್ಷೇತ್ರದ ಲಕ್ಷಾಂತರ ( ಸುಮಾರು 20 ರಿಂದ 25 ಲಕ್ಷ) ಜನರ ಪ್ರತಿನಿಧಿಯೇ ಹೊರತು ಯಾವುದೋ ಪಕ್ಷದ ಪ್ರತಿನಿಧಿಯಲ್ಲ ಎಂಬ ಅರಿವು  ಹಲವು ಸಂಸದರಿಗೇ ಇಲ್ಲ.   ಆದ್ದರಿಂದಲೇ ಅವರು ಜನರ ಪ್ರತಿನಿಧಿಯಂತೆ  ಕಾರ್ಯನಿರ್ವಹಿಸುವ  ಬದಲು ಪಕ್ಷದ  ವ್ಯಕ್ತಿಯಾಗಿಯೇ ವ್ಯವಹರಿಸುತ್ತಾರೆ.
  ತನ್ನ  ಕ್ಷೇತ್ರದ ವಿಶಿಷ್ಟತೆ, ವೈವಿಧ್ಯತೆ, ಸಂಪನ್ಮೂಲಗಳ ಚಿತ್ರಣವನ್ನು  ಸಂಸದರು ಹೊಂದಿದಾಗ ಮಾತ್ರ ಜನರ  ಸಮಸ್ಯೆಗಳಿಗೆ  ಪರಿಹಾರ ಕಂಡುಕೊಳ್ಳಲು ಸಾಧ್ಯ.  ವೈಯಕ್ತಿಕ ಸಮಸ್ಯೆಗಳಿಗೆ  ಏನಾದರೂ ಪರಿಹಾರ ನೀಡುವುದು ಸಂಸದರಿಂದ ನಿರೀಕ್ಷಿತಲ್ಲ.  ಬದಲಿಗೆ ಇಡೀ ಸಮುದಾಯದ   ಒಳಿತಾಗಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಅವರ ಹೊಣೆಗಾರಿಕೆ.
   ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ  ಕೆಲಸ ಮಾಡಬೇಕು.  ಒಬ್ಬ  ಸಂಸದರ ವ್ಯಾಪ್ತಿಯಲ್ಲಿ ಸಾಮಾನ್ಯವಾಗಿ 6 ರಿಂದ 10 ರ ವರೆಗೂ ಶಾಸಕರಿರುತ್ತಾರೆ.  ಕೇಂದ್ರ ಸರ್ಕಾರದ  ಯೋಜನೆಗಳನ್ನು  ಮಂಜೂರು ಮಾಡಿಸಿ, ರಾಜ್ಯ ಸರ್ಕಾರದ ಯೋಜನೆಗಳೊಂದಿಗೆ  ಸಮನ್ವಯಗೊಳಿಸಕೊಂಡು ಅಥವಾ ರಾಜ್ಯ ಸರ್ಕಾರದ ಮೇಲೆ  ಪ್ರಭಾವ ಬೀರಿ ಹೆಚ್ಚುವರಿ ಯೋಜನೆಗಳನ್ನು ಮಂಜೂರು ಮಾಡಿಸಿ,  ತನ್ನ ವ್ತಾಪ್ತಿಯ ಶಾಸಕರ  ಸಹಕಾರ ಪಡೆದು ಅಭಿವೃದ್ಧಿ ಪಥದಲ್ಲಿ ಸಾಗುವಂತೆ  ಮಾಡಬೇಕಾದುದು ಸಂಸದರ ಹೊಣೆ.
  ಆದರೆ  ವಾಸ್ತವ ಇದಕ್ಕೆ  ತೀರಾ ಭಿನ್ನವಾಗಿದೆ. ಸಂಸದರು ಮತ್ತು ಶಾಸಕರು ಅಥವಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ  ಬೇರೆ ಬೇರೆ ಪಕ್ಷಗಳಿಗೆ  ಅವರು ಅನಗತ್ಯವಾಗಿ ಹಾವು ಮುಂಗುಸಿಯ ಸಂಬಂಧ ಹೊಂದಿರುತ್ತಾರೆ . ಎರಡೂ ಕಡೆ ಒಂದೇ ಪಕ್ಷದ ಆಡಳಿತ ವಿದ್ದರೂ ಶಾಸಕ ಮತ್ತು ಸಂಸದರ  ವೈಯಕ್ತಿಕ  ಸಂಬಂಧಗಳು  ಚೆನ್ನಾಗಿಲದಿದ್ದರೆ  ಅಭಿವೃದ್ಧಿ ಕಾರ್ಯ ಕುಂಠಿತವಾಗುತ್ತದೆ. ಇವರ ಜಗಳ, ಪ್ರತಿಷ್ಠೆ, ಅಹಮಿಕೆಯ  ಪ್ರದರ್ಶನ, ಹುಳುಕು- ಕೊಳಕುಗಳ ನಡುವೆ ಕ್ಷೇತ್ರದ ಜನತೆ  ಅಭಿವೃದ್ಧಿ ವಂಚಿತರಾಗುತ್ತಾರೆ.
      ಸಂಸದರಿಗೆ  ಪ್ರತ್ಯೇಕವಾದ  ನಿಧಿ ಇರುತ್ತದೆ. ವಾರ್ಷಿಕ 5 ಕೋಟಿ  ರೂಪಾಯಿಗಳವರೆಗೆ. ನಿಗದಿತ ಉದ್ದೇಶಗಳಿಗಾಗಿ ವೆಚ್ಚ ಮಾಡಲು ಶಿಫಾರಸ್ಸು ಮಾಡುವ ಅಧಿಕಾರ ಅವರಿಗಿದೆ.  ಈ ಮೊತ್ತವನ್ನು ಪೂರ್ತಿಯಾಗಿ  ಸಂಸದರ  ನಿಧಿಯಿಂದ  ಹಣ  ಖರ್ಚು ಮಾಡಲು ಶಿಫಾರಸ್ಸು ಮಾಡಲು 10 ರಿಂದ 15 % ಕಮಿಶನ್  ಪಡೆಯುತ್ತಾರೆಂದು  ಹಲವರು ಹೇಳುತ್ತಾರೆ.  ಬಹಳಷ್ಟು ಸಂದರ್ಭಗಳ್ಲಲಿ  ಸಮದಾಯ ಭವನ, ದೇವಾಲಯಗಳ ಸಭಾಗೃಹ ಮುಂತಾದ  ಅನುತ್ಪಾದಕ ಬಾಬ್ತುಗಳಿಗೇ ಈ ನಿಧಿಯ  ಬಳಕೆಯಾಗುತ್ತದೆ. ಹೊಸ ಹೊಸ  ವಿಚಾರಗಳೊಳಗೂಡಿದ  ಅಭಿವೃದ್ಧಿಯ  ಯೋಜನೆಗಳನ್ನು  ಅನುಷ್ಠಾನಗೊಳಿಸುವ ಅವಕಾಶಗಳನ್ನು  ಬಳಸುವವರು ಇಲ್ಲವೇ ಇಲ್ಲವೆನ್ನುವಷ್ಟ್ಟು ವಿರಳ.
   ಆದರ್ಶ ಗ್ರಾಮ ಯೋಜನೆಗಾಗಿ ಬರುವ ಸಂಸದರ ನಿಧಿಯನ್ನು  ಬಳಸಿ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಸಂಸದರಿಗೆ  ವಿಶೇಷ  ಕಾಳಜಿ  ಮತ್ತು ಜ್ಞಾನ ಅಗತ್ಯ- ಅದಿಲ್ಲವಾದರೆ ಆದರ್ಶ ಗ್ರಾಮ ಯೋಜನೆ, ಪ್ರಚಾರದ  ಸರಕಾಗಿ ಮಾತ್ರ  ಉಳಿಯುತ್ತದೆ.
   ಸಂಸದರ ವಿಶೇಷ ಅಧಿಕಾರವೆಂದರೆ ಶಾಸನಾಧಿಕಾರ ಅಂದರೆ  ಲೋಕಸಭೆಯಲ್ಲಿ ಮಂಡನೆಯಾಗುವ  ವಿಧೇಯಕಗಳನ್ನು  ಅಧ್ಯಯನ ಮಾಡಿ ಅವುಗಳು ಶಾಸನವಾದರೆ ಆಗಬಹುದಾದ ಲಾಭ, ಹಾನಿ ತೋಮದರೆಗಳ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಉದ್ದೇಶಿತ ಮಸುದೆಯ ಅಂಗೀಕಾರ, ಅಥವಾ ತಿರಸ್ಕೃತವಾಗುವಂತೆ  ನೋಡಿಕೊಳ್ಳುವ  ಅಧಿಕಾರವಿದೆ.  ವಾಸ್ತವದಲ್ಲಿ  ಹೆಚ್ಚಿನ ಸಂಸದರು , ಈ ಕುರಿತು ತಲೆಕೆಡಿಸಿಕೊಳ್ಳುವುದಢೆ ಇಲ್ಲ.   ಪಕ್ಷಾಧಾರಿತ ಇಂದಿನ  ವ್ಯವಸ್ಥೆಯಲ್ಲಿ  ಆಡಳಿತ ಪಕ್ಷದವರು ಹೈಕಮಾಂಡ್ ಆದೇಶ ಪಾಲನೆಯಂತೇ ತಮ್ಮ  ಕರ್ತವ್ಯವೆಂದು ಭಾವಿಸಿ,  ಉದ್ದೇಶಿತ ಮಸೂದೆಯಿಂದ  ತಮ್ಮ  ಕ್ಷೇತ್ರದ  ಜನತೆಗೆ   ತೊಂದರೆಯಾಗುತ್ತದೆಂದು ಗೊತ್ತಾದರೂ ಬಾಯ್ಮುಚ್ಚಿಕೊಂಡು ಅನುಮೋದಿಸುತ್ತಾರೆ.  ವಿರೋಧ  ಪಕ್ಷದ ಪ್ರತಿ ಹರಿದು ಹಾಕುವುದೇ ತಮ್ಮ  ಘನ ಕೆಲಸ ಆಡಳಿತ ಪಕ್ಷಕ್ಕೆ  ಅಡ್ಡಿ ಉಂಟು ಮಾಡುವುದೇ  ತಮ್ಮ  ಕರ್ತವ್ಯವೆಂಬಂತೆ  ನಡೆದುಕೊಳ್ಳುತ್ತಾರೆ. ಜವಾಬ್ದಾರಿಯುತ ಸಂಸದರ ಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ  ಮತದಾರರೂ ಕಾರಣವೆಂಬುದು  ಕಟು ಸತ್ಯ.
   ಸಂಸದರಾದವರು ವೈಯಕ್ತಿಕವಾಗಿ ಕೂಡ ಮಸೂದೆ ಮಂಡಿಸಿ ಅದನ್ನು ಚರ್ಚೆಗೆ  ಕೈಗೆತ್ತಿಕೊಳ್ಳಲು  ಸೂಚಿಸಬಹುದು.  ಸಮರ್ಥ ಸಂಸದರಾದವರು ಇಡಿ ದೇಶಕ್ಕೆ  ಅನ್ವಯವಾಗುವ  ಅಥವಾ ತಮ್ಮ  ಕ್ಷೇತ್ರಕ್ಕೆ ಅನ್ವಯವಾಗುವ  ರೀತಿಯ  ವಿಧೇಯಕ ಮಂಡಿಸುವ  ಅವಕಾಶವಿದೆ.  ರೈತರ ಸಾಲಮನ್ನಾ ಹಾಗೂ  ಕನಿಷ್ಟ ಬೆಂಬಲ ಬೆಲೆಯ ಅಧಿಕಾರದ  ಕುರಿತು ಸಂಸದರೊಬ್ಬರು  ಖಾಸಗಿ ಮಸೂದೆಯನ್ನು   ಇತ್ತೀಚೆಗೆ  ಕೊನೆಗೊಂಡ ಅಧಿವೇಶನದಲ್ಲಿ  ಮಂಡಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು.
   ತಮ್ಮ ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಅಥವಾ ಸಾಮೂಹಿಕ ಹಿತಾಸಕ್ತಿಯ ಕುರಿತು ಖಾಸಗಿ ಮಸೂದೆಗಳ ಮಂಡನೆಯಾಗುವುದು ಅಪರೂಪ. ಯಾಕೆಂದರೆ ಹಲವು ಸಂಸದರಿಗೆ  ಈ ರೀತಿ ಚಿಂತನೆ ಮಾಡುವ  ಅಗತ್ಯವೂ ಇಲ್ಲ, ಮತ್ತು ಪುರುಸೊತ್ತೂ ಇಲ್ಲ. ಹೇಗಿದ್ದರೂ ಜಾತಾ ಮತಗಳ ಗಾಳ  ಹಾಕಿ,  ಭಾವೋದ್ರೇಕದ  ಭಾಷಣ, ದ್ವೇಷ- ಅಸೂಯೆಗಳನ್ನು  ಹಬ್ಬಿಸಿ ಮತದಾರರನ್ನು  ಮರುಳು ಮಾಡುವ ಧೈರ್ಯ ಅವರಿಗಿದೆ.
   ಅಸ್ತಿತ್ವದಲ್ಲಿರುವ  ಕಾನೂನಿನ  ದುರ್ಬಳಕೆಯಾಗುತ್ತಿರುವ ಸಂದರ್ಭಗಳಲ್ಲಿ  ಅದನ್ನು ಎತ್ತಿ ಹೇಳುವ , ವಿರೋಧಿಸುವ  ಅಧಿಕಾರ ಸಂಸದರಿಗಿದೆ.   ಆದರೆ ಆಡಳಿತ ಪಕ್ಷದ ಸಂಸದರು ತಮ್ಮದೇ ಪಕ್ಷದ ವಿರುದ್ಧ ಮಾತನಾಡುವ ಧಾಷ್ಟ್ರ್ಯ ತೋರಿಸುವದಿಲ್ಲ.  ತಾವು ವಿರೋಧಿಸುವುದರಿಂದ  ರಾಜಕೀಯ  ಲಾಭ ಸಿಗುವುದಾದರೆ ಮಾತ್ರ ಅವರು  ಒಂದಷ್ಟು ಗಲಭೆ ಎಬ್ಬಿಸುತ್ತಾರೆ.
    ದೇಶದಲ್ಲಿ  ಹಾಗೂ ತಮ್ಮ  ಕ್ಷೇತ್ರಗಳಲ್ಲಿ ನಡೆಯುವ  ಘಟನೆಗಳ ಕುರಿತು ವಿಮರ್ಶಿಸುವ  ಮೇಲುಸ್ತುವಾರಿ ಅಧಿಕಾರ ಸಂಸದರಿಗೆ ಇದೆ.   ಶೂನ್ಯ ಸಮಯ  ಪ್ರಶ್ನೋತ್ತರ  ಅಧಿಕಾರ ಸಂಸದರಿಗೆ  ಇದೆ.   ಶೂನ್ಯ ಸಮಯ ಪ್ರಶ್ನೋತ್ತರ ಅವಧಿ ಹಾಗೂ ಇತರ ಸಂದರ್ಭಗಳನ್ನು ಇದಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಇತ್ತಿಚಿನ  ವರ್ಷಗಳಲ್ಲಿ  ಸಂಸತ್ ಅಧಿವೇಶನಗಳು ಗದ್ದಲ, ಗಲಾಟೆಗಳಲ್ಲೇ ಮುಕ್ತಾಯವಾಗುತ್ತಿರುವದು ಸಾಮಾನ್ಯವಾಗಿದೆಯೇ ಹೊರತು ಸೈದ್ಧಾಂತಿಕ  ಚರ್ಚೆ ಆಗುಹೋಗುಗಳ ವೈಚಾರಿಕ  ವಿಮರ್ಶೆಗಳು ವಿರಳವಾಗುತ್ತವೆ.  ಪಾಲ್ಗೊಳ್ಳುವ  ಸಂಸದ ಸಂಖ್ಯೆ, ಬೆರಳೆಣಿಕೆ ದಾಟುತ್ತಲಿಲ್ಲ.
    ರಾಷ್ಟ್ರಪತಿ, ಉಪರಾಷ್ಟ್ರಪತಿ , ಲೋಕಸಭಾ ಸ್ಪೀಕರ್‍ರನ್ನು  ಆಯ್ಕೆ ಮಾಡುವ  ಹೊಣೆಗಾರಿಕೆ  ಸಂಸದರಿಗಿದೆ ಎಂಬುದು  ಬರೀ ಪುಸ್ತಕದಲ್ಲಿ  ಮಾತ್ರ. ಯಾಕೆಂದರೆ  ಇಂತಹ ಸಂದರ್ಭಗಳಲ್ಲಿ ಪಕ್ಷದ ಹೈಕಮಾಂಡ್ ನೀಡುವ  ಆದೇಶ- ಬಿಪ್  ಅಂತಿಮವಾಗುತ್ತದೆ. ಇಲ್ಲೆಲ್ಲ ವೈಯಕ್ತಿಕ  ಅಭಿಪ್ರಾಯಕ್ಕೆ  ಬೆಲೆಯೇ ಇಲ್ಲವಾಗಿದೆ.  ಸಂಸದರ ಮತಯಾಧಿಕಾರವೆಂಬುದು  ಒಂದು ವಿಧದ  ಅಣಕವೇ ಆಗಿದೆ.
   ಬಜೆಟ್ ಅಧಿವೇಶನದಲ್ಲಿ  ಪಾಲ್ಗೊಂಡು ವಿವಿಧ ವಿಭಾಗಗಳಿಗೆ  ನೀಡಿರುವ  ಹಣ ಹಂಚಿಕೆಯನ್ನು ಪರಾಮರ್ಶಿಸುವ , ಅವುಗಳ ಸಮರ್ಪಕ ಬಳಕೆಯ ಕುರಿತು ನಿಗಾವಹಿಸುವ   ನಿಧಿ ನಿರ್ವಹಣಾ ಅಧಿಕಾರ ಸಂಸದರಿಗಿದೆ.  ಬಜೆಟ್ ಮಂಡನೆಯಾದೊಡನೆ  ಮೇಜು ಕುಟ್ಟಿ ಸ್ವಾಗತಿಸುವುದೇ ತಮ್ಮ ಕರ್ತವ್ಯವೆಂದು  ಭಾವಿಸುವ  ಆಡಳಿತ ಪಕ್ಷದ ಸಂಸದರು ಹಾಗೂ ಬಜೆಟ್ ನಿರುಪಯುಕ್ತವೆಂದೋ,  ಜನ ವಿರೋಧಿಯೆಂದು ಜರಿಯುವುದೇ  ತಮ್ಮ ಕರ್ತವ್ಯವೆಂದು ಭಾವಿಸುವ  ಸಂಸದರೇ ಹೆಚ್ಚಿನ  ಸಂಖ್ಯೆಯಲ್ಲಿ ಇಂದು ಕಾಣಸಿಗುತ್ತಾರೆ.  ಇವರಲ್ಲಿ  ಬಹುತೇಕರು ಬಜೆಟ್‍ನ್ನು  ಅಭ್ಯಸಿಸುವುದೇ ಇಲ್ಲ.
   ಇವುಗಳಲ್ಲದೇ ವಿವಿಧ  ಸಂಸದೀಯ ಸಮಿತಿ ಹಾಗೂ ಉಪ  ಸಮಿತಿಗಳಲ್ಲಿ  ಕಾರ್ಯ ನಿರ್ವಹಿಸುವ  ಅಧಿಕಾರ ಪ್ರತಿಯೊಬ್ಬ  ಸಂಸದರಿಗೂ   ಲಭ್ಯವಾಗುತ್ತದೆ. ಟಿಎಡಿಎ ಪಡೆಯುವುದರ ಹಾಗೂ ಭತ್ಯೆಗಳನ್ನೂ ಪಡೆದು ಎಷ್ಟು ಜನ ಸಂಸದರು ಕರ್ತವ್ಯಪ್ರಜ್ಞೆ  ತೋರುತ್ತಾರೆಂಬುದು  ಉತ್ತರವಿಲ್ಲದ ಪ್ರಶ್ನೆ.
   ಭಾರತದ ಸಂವಿಧಾನ ಕರ್ತರು ನೀಡಿರುವ  ಅಧಿಕಾರ ಹಾಗೂ ಹೊಣೆಗಾರಿಕೆಗಳನ್ನು  ಸ್ವತಂತ್ರವಾಗಿ ನಿರ್ವಹಿಸುವ  ಸಂಸದರು ಎಷ್ಟು ಜನ ಇದ್ದಾರೆಂಬುದು ಹುಡುಕಬೇಕಾದ ಸ್ಥಿತಿ ಇದೆ.  ಹಲವಾರು ಬಾರಿ  ಆಯ್ಕೆಯಾದ  ನಂತರವೂ ತನ್ನ ಸ್ವ ಸಾಮಥ್ರ್ಯದ  ಮೇಲೆ ಮತ ಕೇಳುವ  ನೈತಿಕ  ಹಕ್ಕನ್ನು  ಹಲವರು ಕಳೆದುಕೊಂಡಿದ್ದಾರೆ.  ಅದರಿಂದಾಗಿಯೇ ಪಕ್ಷ ಅಥವಾ ಯಾವುದೋ ಒಬ್ಬ   ನೇತಾರನ ಹೆಸರಿನಲ್ಲಿ ಮತ ಯಾಚಿಸುವ  ಹೀನಾಯ ಸ್ಥಿತಿ ಹಲವರದ್ದಾಗಿದೆ.
   ಸೈದ್ಧಾಂತಿಕ ನಿಲುವು,  ಸಮುದಾಯದ  ಆರ್ಥಿಕ- ಸಾಮಾಜಿಕ ಉನ್ನತಿಗಾಗಿ ದೇಶದ ಅಭಿವೃದ್ಧಿಗಾಗಿ ನಿಶ್ಚಿತ ಕಾರ್ಯ ಯೋಜನೆಗಳ ಆಧಾರದ ಮೇಲೆ  ಮತವನ್ನು  ಕೇಳುವ  ಅಭ್ಯರ್ಥಿಗಳು ಇಂದು ಕಾಣಸಿಗುವುದು ಅಪರೂಪ. ಪರಸ್ಪರ  ವೈಯಕ್ತಿಕ ದೂಷಣೆ, ಭಾವೋದ್ವೇಕಗೊಳಿಸುವ  ಹೇಳಿಕೆಗಳು, ಭಾಷಣಗಳೇ ಇಂದಿನ  ಅಭ್ಯರ್ಥಿಗಳ  ಹಾಗೂ ಪಕ್ಷಗಳ  ಬಂಡವಾಳ.  ಪ್ರಜಾತಂತ್ರ ವ್ಯವಸ್ಥೆಯ  ಅಧಃಪತನ ಹಾಗೂ ಅಪಾಯದ  ಮುನ್ಸೂಚನೆಯಿದು.  ಮತದಾರರು  ಜಾಗೃತರಾದಾಗ  ಅಥವಾ  ಜಾಗೃತರು  ಮಾತ್ರ  ಮತದಾರರಾಗುವ  ಮಾತ್ರ  ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ಸು ಪಡೆಯುತ್ತದೆ.

Tuesday, 7 May 2019

ಸೃಜನ ಸಾಹಿತ್ಯ ಪುರಸ್ಕಾರಕ್ಕೆ ಆಹ್ವಾನ

ಸೃಜನ  ಸಾಹಿತ್ಯ ಪುರಸ್ಕಾರಕ್ಕೆ  ಆಹ್ವಾನ

ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ ಹಾಗೂ ಸೃಜನ ಪ್ರಕಾಶನದ ಪ್ರಕಟಣೆ.

ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತ ಒಂದಿಷ್ಟು ತೊಡಗಿಸಿಕೊಂಡ ನಮ್ಮ ಸಂಸ್ಥೆಯು
ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ  ಮಕ್ಕಳ ಕವಿತೆ ಅಥವಾ ಮಕ್ಕಳ  ಕತೆಗಳ ಸಂಕಲನಗಳನ್ನು ಪ್ರಕಟಿಸಲು ಇಚ್ಚಿಸುವ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಹಸ್ತ ಪ್ರತಿ ಆಹ್ವಾನಿಸುತ್ತದೆ.

ಕನಿಷ್ಠ 70 ಪುಟಗಳಿರಬೇಕು .ನುಡಿಯಲ್ಲಿ ಟೈಪ್ ಮಾಡಿಸಿ. ಪಿ.ಡಿ ಎಫ್  ಅತ್ವ ms ofice , ಫೈಲ್ ಮಾಡಿ ಕಳಿಸಬೇಕು. ಶೀಘ್ರ ತೀರ್ಪು ಗಾರ ಮಂಡಳಿಗೆ ತಲುಪಿಸಲಿಕ್ಕಾಗಿ ,ಶೀಘ್ರ ಕಾರ್ಯೋನ್ಮುಖ ರಾಗಲಿಕ್ಕಾಗಿ ನಾವು  ತಮ್ಮಿಂದ ಈ ಮೇಲ್ ನಲ್ಲಿ ಮಾತ್ರ ವೇ  ಪೈಲ್ ನಿರೀಕ್ಷೆ ಮಾಡುತ್ತೇವೆ.ಆಯ್ಕೆಯ ಹಕ್ಕು ,
ಸಂಸ್ಥೆಯ ತೀರ್ಮಾನವೇ ಅಂತಿಮ ಆಗಿರುತ್ತದೆ...
ನಿಮ್ಮ ಬರಹಗಳ ಪೈಲ್  ಮೇ,10 ರೊಳಗೆ ತಲುಪಬೇಕು.

ಈ ವರ್ಷ ಉತ್ತಮಾವಾಗಿದ್ದ  ಕವಿತೆ ಅಥವಾ ಕತೆಯ ಒಬ್ಬ ಸಾಹಿತಿಯ ಹಸ್ತ ಪ್ರತಿಗೆ ಮಾತ್ರ  ಸೃಜನ ಬಾಲ ಸಾಹಿತ್ಯ ಪುರಸ್ಕಾರ ನೀಡಿ  ನಮ್ಮ ಪ್ರಕಾಶನದಲ್ಲೇ  ಪುಸ್ತಕ ಪ್ರಕಟಿಸುತ್ತೇವೆ.

ಹೆಚ್ಚಿನ ಮಾಹಿತಿಗೆ  ಸಂಸ್ಥೆಯ ಅಧ್ಯಕ್ಷರಾದ
ರವೀಂದ್ರ .ಆರ್. ಇವರನ್ನು ಸಂಪರ್ಕಿಸಬಹುದು.
9380463661.
ಪ್ರತಿಗಳನ್ನು ಕೆಳಗಿನ ಈ ಮೇಲ್ ಗೆ ಕಳುಹಿಸಬೇಕು.

srujana.shikshana@gmail.com.